
'ಮಾಯಾ ಕನ್ನಡಿ' ಒಂದು ಪಕ್ಕಾ ಸಸ್ಪೆನ್ಸ್ ಥಿಲ್ಲರ್ ಸಿನಿಮಾ. ಒಂದು ಸಸ್ಪೆನ್ಸ್ ಸಿನಿಮಾಗೆ ಬೇಕಾದ ಎಲ್ಲ ಅಂಶಗಳು ಸಿನಿಮಾದಲ್ಲಿದೆ. ಪ್ರೇಕ್ಷಕರಿಗೆ ಥ್ರಿಲ್ ನೀಡುವುದರ ಜೊತೆಗೆ ಸಿನಿಮಾದ ಭಾವುಕ ದೃಶ್ಯಗಳು ಮನಸ್ಸಿಗೆ ಹತ್ತಿರ ಆಗುತ್ತದೆ
ಬ್ಲೂವೇಲ್ ಗೇಮ್ ಕಥೆ ಆದಾರಿತ ಕಥೆ 2020 ಕ್ಕೆ ಹಳತೇ ಅನಿಸಿದರೂ, ಚಿತ್ರ ಬ್ಲೂವೇಲ್ ಗೇಮ್ ಬಗ್ಗೆ ಅನ್ನುವುದಕ್ಕಿಂತ ವರ್ಣ ತಾರತಮ್ಯ ನೀತಿಯ ವಿರುದ್ದ ಸಂದೇಶ ಕೊಡುವ ಚಿತ್ರ ಎಂದು ಹೇಳಬಹುದು. ನಿರ್ದೇಶಕ ವಿನೋದ್ ಪೂಜಾರಿ ತಮ್ಮ ಪ್ರಥಮ ಪ್ರಯತ್ನದಲ್ಲೇ ಗಮನಾರ್ಹ ಚಿತ್ರವನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಲೇಜಿನ ಟ್ರಸ್ಟಿ ಶಿಫಾರಿಸ್ಸಿನ ಮೇಲೆ ಕಾಲೇಜಿಗೆ ಸೇರುವ ಹೊಸ ವಿದ್ಯಾರ್ಥಿ ಸ್ಯಾಂಡಿಗೆ (ಪ್ರಭು ಮುಂಡ್ಕೂರು) ಒಂದು ಸುಮಧುರವಾದ ಲವ್ ಫ್ಲಾಶ್ ಬ್ಯಾಕ್ ಇದೆ. ಕಾಲೇಜಿನಲ್ಲಿ ಆಗಾಗಲೇ ಹಲವಾರು ವಿದ್ಯಾರ್ಥಿಗಳು ಬ್ಲೂವೇಲ್ ಆಟಕ್ಕೆ ಬಲಿಯಾಗಿದ್ದು, ಸ್ಯಾಂಡಿ ಎಂಟ್ರಿ ಆದಮೇಲೆ ನೇಹ (ಶ್ರೀಶ್ರೇಯ) ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಾಗ, ಸ್ಯಾಂಡಿ ಮೇಲೆನೆ ಎಲ್ಲರಿಗೂ ಅನುಮಾನ. ಸ್ಯಾಂಡಿನೇ ಈ ಎಲ್ಲಾ ಕೊಲೆಗಳಿಗೆ ಮೂಲಕಾರಣವೇ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ಮಾಯ ಕನ್ನಡಿ ಚಿತ್ರ ನೋಡಲೇ ಬೇಕು.
ಕೊಲೆಯ ಹಿನ್ನೆಲೆ ಅರಸಿಹೋಗುವ ಕಥೆಗಳು ಹಲವಾರು ಬಂದಿದ್ದರೂ, ಮಾಯಕನ್ನಡಿಯ ಚಿತ್ರಕಥೆ ದ್ವಿತಿಯಾರ್ಧದಲ್ಲಿ ಪ್ರೇಕ್ಷಕರನ್ನು ಉಸಿರು ಬಿಗಿಹಿಡಿದು ನೋಡುವಂತೆ ಮಾಡುತ್ತದೆ. ಸ್ಯಾಂಡಿ ಮೇಲೆ ಪ್ರಿಯಾ (ಕಾಜಲ್ ಕುಂದರ್) ಅನುಮಾನ ಪಟ್ಟ ಮೇಲೆ ಪೋಲಿಸ್ ಮತ್ತು ಪ್ರಿಯಾ ಇನ್ವೆಸ್ಟಿಗೇಟ್ ಮಾಡುವ ಚಿತ್ರಕಥೆ ತುಂಬಾ ಅಧ್ಬುತವಾಗಿ ಮೂಡಿಬಂದಿದೆ. ಚಿತ್ರದಲ್ಲಿ ಕೆ ಎಸ್ ಶ್ರೀಧರ್ ಮನೋಜ್ಣಾ ಅಭಿನಯ ನೀಡಿದ್ದಾರೆ. ಚಿತ್ರದ ಜೀವಾಳ ಅವರ ಅಭಿನಯ ಅಂದರೆ ತಪ್ಪಾಗಲಾರದು.
ಇನ್ನು ಅಭಿನಯದ ಮಟ್ಟಿಗೆ ಹೇಳುವುದಾದರೆ, ಪ್ರಭು ಮುಂಡ್ಕೂರು ಕ್ಲಾಸ್ ವರ್ಗದ ಸೂಪರ್ ಸ್ಟಾರ್ ಆಗುವ ಎಲ್ಲಾ ಲಕ್ಷಣಗಳು ಕಾಣುವಂತೆ ಅಭಿನಯಿಸಿದ್ದಾರೆ. ವರ್ಟಿಗೂ ರೋಗದಿಂದ (ಎತ್ತರದ ಪ್ರದೇಶದಲ್ಲಿರುವಾಗ ಭಯಪಡುವುದು) ಬಳಲುತ್ತಿರುವ ಸ್ಯಾಂಡಿ, ತನ್ನ ಪ್ರಿಯತಮೆಯನ್ನು ಕಳೆದುಕೊಂಡು ಭಗ್ನ ಪ್ರೇಮಿಯಾಗಿ ಮನೋಜ್ಣ ಅಭಿನಯ ನೀಡಿದ್ದಾರೆ. ಅನ್ವಿತಾ ಸಾಗರ್ ಮತ್ತು ಕಾಜಲ್ ಕುಂದರ್ ಜೊತೆಗೆ ಹೊಸಬರಾದ ಶ್ರೀಶ್ರೇಯ ಮತ್ತು ದೀಕ್ಷಾ ಮನೋಜ್ಣ ಅಭಿನಯ ನೀಡಿದ್ದಾರೆ. ಚಿತ್ರದ ಮೂಲಕ ಅನೂಪ್ ಸಾಗರ್ ಎಂಬ ಹೊಸ ಖಳ ನಟ ಕೂಡ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ.
ಚಿತ್ರಕ್ಕೆ ಅಭಿಶೇಕ್ ಎಸ್ ಎನ್ ಮಧುರವಾದ ಸಂಗೀತ ನೀಡಿದ್ದು, "ಬಿದ್ದಾಗಿದೆ" ಮತ್ತು "ಕೇಳು ಜಾಣೆಯೆ" ಹಾಡುಗಳು ಕಾಡದೆ ಬಿಡದು. ಮಣಿ ಕೂಕಲ್ ಕನ್ನಡದಲ್ಲಿ ಪ್ರಥಮ ಚಿತ್ರದಲ್ಲೇ ತಮ್ಮ ಛಾಯಾಗ್ರಹಣದ ಮೂಲಕ ಛಾಪು ಮೂಡಿಸುವುದರಲ್ಲಿ ಸಫಲರಾಗಿದ್ದಾರೆ. ಆನಂದ್ ರಾಜಾವಿಕ್ರಂ ಹಿನ್ನೆಲೆ ಸಂಗೀತ ಚಿತ್ರದ ಓಟಕ್ಕೆ ಸಾಥ್ ನೀಡುತ್ತದೆ.
ಚಿತ್ರ ಮೊದಲಾರ್ಧದಲ್ಲಿ ಇನ್ನೂ ಸ್ವಲ್ಪ ಚಿತ್ರಕಥೆಗೆ ಒತ್ತು ನೀಡಬೇಕೆನಿಸಿತ್ತು ಅನಿಸಿದರೂ, ವೇಗವಾಗಿ ಸಾಗುವುದರಿಂದ ಎಲ್ಲೂ ಬೋರ್ ಹೊಡೆಸುವುದಿಲ್ಲ. ಉತ್ತಮ ಸಂದೇಶ ಇರುವ ಮಾಯಾ ಕನ್ನಡಿ ನೋಡಲೇ ಬೇಕಾದ ಚಿತ್ರ.