
ಆಘಾತಕಾರಿ ಘಟನೆಯೊಂದರಲ್ಲಿ, ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಸ್ತುಗಳನ್ನು ವೀಕ್ಷಿಸಿದ ನಂತರ 10 ವರ್ಷದ ಬಾಲಕ, ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದೆ. ಠಾಣಾಧಿಕಾರಿ (ಎಸ್‌ಎಚ್‌ಒ) ಪಂಕಜ್ ಮಿಶ್ರಾ ಮಾತನಾಡಿ, ಬಾಲಕನನ್ನು ಬಂಧಿಸಲಾಗಿದ್ದು, ಆತ ಮಾಡಿರುವ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದಿದ್ದಾರೆ.
"ನಾವು ಎಫ್‌ಐಆರ್ ಅನ್ನು ದಾಖಲಿಸಿದ್ದೇವೆ, ಇದರಲ್ಲಿ ಬಾಲಕನ ಮೇಲೆ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯ ಆರೋಪವಿದೆ" ಎಂದು ಅವರು ಹೇಳಿದರು. ಬಾಲಕನನ್ನು ಜಿಲ್ಲಾ ಬಾಲಾಪರಾಧಿ ಮಂಡಳಿಯ ಮುಂದೆ ಹಾಜರುಪಡಿಸಲಾಗಿದ್ದು, ಬಾಲ ಗೃಹಕ್ಕೆ ಕಳುಹಿಸಲಾಗಿದೆ.
ಬಾಲಕಿ 3ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಘಟನೆ ನಡೆದಾಗ ಮನೆಯಲ್ಲಿ ಒಬ್ಬಳೇ ಇದ್ದಳು ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ. ತಂದೆ-ತಾಯಿ ಮನೆಗೆ ಬಂದು ನೋಡಿದಾಗ ಆಕೆ ಹೆದರಿ ಅಳುತ್ತಿದ್ದಳು. ಕುಟುಂಬದವರು ಘಟನೆಯ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
"ಅಪ್ರಾಪ್ತ ಬಾಲಕನು ತನ್ನ ಸಂಬಂಧಿಕರೊಬ್ಬರಿಗೆ ಸೇರಿದ ಮೊಬೈಲ್ ಫೋನ್‌ನಲ್ಲಿ ಅಶ್ಲೀಲತೆಯನ್ನು ವೀಕ್ಷಿಸಿದ್ದೇನೆ ಮತ್ತು ನಂತರ ತಾನು ಅಪರಾಧ ಎಸಗಿದ್ದೇನೆ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾನೆ" ಎಂದು ಅವರು ಹೇಳಿದರು.