
ನವದೆಹಲಿ: ವಿಶ್ವದ ಅತಿದೊಡ್ಡ ರೋಗನಿರೋಧಕ ಲಸಿಕೆ ಯೋಜನೆಯನ್ನು ಪ್ರಾರಂಭಿಸಲು ಭಾರತ ಸಜ್ಜಾಗುತ್ತಿರುವಾಗ, ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ಬಹುನಿರೀಕ್ಷಿತ ಲಸಿಕೆ ವಿರುದ್ಧದ ವದಂತಿಗಳಿಗೆ ಕಿವಿಗೊಡದಂತೆ ವಿನಂತಿಸಿದ್ದಾರೆ.
"ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ನಾನು ಜನರಿಗೆ ಮನವಿ ಮಾಡಲು ಬಯಸುತ್ತೇನೆ. ಲಸಿಕೆ ಪ್ರಯೋಗದಲ್ಲಿ ನಮ್ಮ ಪ್ರಮುಖ ಮಾನದಂಡವೆಂದರೆ ಸುರಕ್ಷತೆ ಮತ್ತು ಪರಿಣಾಮಕಾರಿತ್ವ" ಎಂದು ವರ್ಧನ್ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಣುಕು ಲಸಿಕಾ ಪ್ರಯೋಗ ಪರಿಶೀಲಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.
ದೆಹಲಿ ಮಾತ್ರವಲ್ಲದೇ ಭಾರತದಾದ್ಯಂತ ಕೊರೊನಾ ಲಸಿಕೆ ಉಚಿತವಾಗಿದೆ.
ದೆಹಲಿಯಲ್ಲಿ, ಶಹದಾರಾದ ಸರ್ಕಾರ ನಡೆಸುವ ಗುರು ತೇಜ್ ಬಹದ್ದೂರ್ ಆಸ್ಪತ್ರೆ, ದರಿಯಗಂಜ್ನ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ದ್ವಾರಕಾದ ಖಾಸಗಿ ವೆಂಕಟೇಶ್ವರ ಆಸ್ಪತ್ರೆ ಎಂಬ ಮೂರು ತಾಣಗಳಲ್ಲಿ ಅಣಕು ಲಸಿಕಾ ಪ್ರಯೋಗ ನಡೆಸಲಾಗುತ್ತಿದೆ.
"ಈ ಹಿಂದೆ ಪೋಲಿಯೊ ರೋಗನಿರೋಧಕ ಸಮಯದಲ್ಲಿ ವಿವಿಧ ರೀತಿಯ ವದಂತಿಗಳು ಹರಡಿದ್ದವು, ಆದರೆ ಜನರು ಅದನ್ನು ನಿರ್ಲಕ್ಷಿಸಿ ಲಸಿಕೆ ತೆಗೆದುಕೊಂಡರು ಮತ್ತು ಈಗ ಭಾರತ ಪೋಲಿಯೊ ಮುಕ್ತವಾಗಿದೆ" ಎಂದು ಕೇಂದ್ರ ಸಚಿವರು ನೆನಪಿಸಿದರು.